ವಿಷಯಕ್ಕೆ ಹೋಗಿ

ಮಸ್ತಕಕ್ಕಿಳಿಯುವ ಪುಸ್ತಕದ ಆಲಯದೊಳಗೆ...

ಗ್ರಂಥಾಲಯ ಜೀವಂತ ದೇವಾಲಯ ಎನ್ನುವ ಬೋರ್ಡಿನ ಕೆಳಗೆ ಪ್ರವೇಶಿಸಿದಾಗ ಆಳೆತ್ತರ ಏಳೆಂಟು ಕಪಾಟುಗಳು ಕಣ್ಣಿಗೆ ಬೀಳುತ್ತವೆ. ನೀಟಾಗಿ ಪುಸ್ತಕಗಳನ್ನು ಜೋಡಿಸುವದೆಂದರೆ ಓದುಗರಿಗೆ ಅದೆಷ್ಟೂ ಹಿಂಸೆನೋ..? ಅಡ್ಡಾದಿಡ್ಡಿಯಾಗಿ ಕಾಲುಜಾರಿ ಬಿದ್ದ ಪುಸ್ತಕಗಳ ಸಾಲಿನಲ್ಲಿ ಇಷ್ಟವಾದದನ್ನು ಹುಡುಕುವಾಗ ಧೂಳು ಮೂಗಿನ ಹೊಳ್ಳೆಯೊಳಗೆ ಲಬಕ್ಕೆನೆ ಹೊಕ್ಕೆ ಗಬಕ್ಕನೇ ಸೀನುವಂತೆ ಮಾಡುತ್ತದೆ.
ಕತೆಯ ಪುಸ್ತಕ ಎಂದು ಬರೆದ ರ್ಯಾಕ್‍ನಲ್ಲಿ ಹಳೆಯ ಕಾದಂಬರಿಗಳ ರಾಶಿ ಇರುತ್ತದೆ. ವಿಜ್ಞಾನ ಎಂದ ಕಡೆ ಕವನ ಸಂಕಲನದ ಗುಚ್ಛಗಳು ಓದಲು ಮೈ ತೆರೆದುಕೊಂಡು ನಿಂತಿರುತ್ತವೆ. ರಟ್ಟು ಹರಿದು ಹೋಗಿ ಹೆಸರು ಮರೆತ ಅನಾಥ ಬುಕ್ಕುಗಳೂ ಆಶಾಭಾವನೆ ಹೊತ್ತುಕೊಂಡು ಬದುಕುತ್ತಿರುತ್ತವೆ.
ಯಾರೋ ಬರೆದ ಅನುಭವದ ಸಾಲುಗಳು ಮತ್ಯಾರಿಗೋ ಇಷ್ಟವಾಗಿ ಹಸಿರು,ಕೆಂಪು ಪೆನ್ನಿನ ಮಾರ್ಕುಗಳನ್ನು ಅಂಟಿಸಿಕೊಂಡು ಫೋಕಸ್ ಆಗುತ್ತವೆ. ಮತ್ತೇ ಅಲ್ಲಲ್ಲಿ ಟೀಕೆ-ಟಿಪ್ಪಣಿಯ ವಿಮರ್ಶೆ ಕೂಡಾ ಇರುತ್ತದೆ. ಪ್ರೇಮಗವನಕ್ಕೆ ಹುಡುಗಿಯ ಇಂಗ್ಲೀಷ್ ಕ್ಯಾಪಿಟಲ್ ಲೆಟರ್‍ನ್ನು ದೊಡ್ಡಾದಾಗಿ ಬಿಡಿಸಿ ಕನಸುಗಳಿಗೆ ಜಾರಿಹೋಗುವ ಸಂಭವವೂ ಸಾಕಷ್ಟು ಪುಸ್ತಕದಲ್ಲಿ ಗೋಚರವಾಗುತ್ತವೆ.
ರೋಚಕವಾಗಿ ಓದಿಸಿಕೊಳ್ಳುತ್ತಾ ಸಾಗುವ ಕಾದಂಬರಿ ಇನ್ನೇನು ಕ್ಮೈಮ್ಯಾಕ್ಸ್ ಸ್ಟೋರಿಯ ಕಡೆ ಬಂದಾಗ ಯಾರೋ ಹಾಳೆ ಕಿತ್ತುಕೊಂಡು ಹೋಗಿರುವದನ್ನು ಕಂಡು ಸಾಂಭಾರ ಇಲ್ಲದೇಯೇ ಮಸಾಲದೋಸೆ ತಿಂದ ಅನುಭವವಾಗುತ್ತದೆ. ಹಾಳೆ ಕಿತ್ತಿದವನನ್ನು ಮನದಲ್ಲಿ ಅವನ ಮತ್ತು ಅವನ ಇಡೀ ವಂಶವನ್ನೇ ಜಾಲಾಡಿಸುವಂತೆ ಸಿಟ್ಟು ಉಕ್ಕಿ ಎದುರಿನ ಟೇಬಲ್‍ಗೆ ರಪ್ಪಕ್ಕನೇ ಮುಷ್ಟಿಯಿಂದ ಗುದ್ದಿ ಇತರರು ನಮ್ಮ ಕಡೆ ನೋಡುವಂತೆ ಮಾಡುತ್ತೇವೆ.
ಗೊರಕೆಯ ಸಪ್ಪಳ, ಮೇಸೆಜ್‍ನ ಟ್ಯೂನ್, ಪರಪರ ತಿರುಗಿಸುವ ಹಾಳೆಗಳ ಸದ್ದು ಶಾಂತವಾಗಿ ಓದುತ್ತಿದ್ದ ವಿಶ್ವಾಮಿತ್ರನ ತಪ್ಪಸ್ಸಿಗೆ ಮೇನಕೆಯ ಹಾಗೇ ಭಂಗ ಮಾಡುತ್ತವೆ. ಅಂಗವಿಕಲ ಕುರ್ಚಿ ಅಲುಗಾಡುತ್ತಾ ಧ್ಯಾನಕ್ಕೆ ಅಡ್ಡಿ ಮಾಡುವಲ್ಲಿ ಯಶಸ್ವಿಯಾಗುತ್ತೆ. ಒಬೆರಾಯನ ಕಾಲದ ಟ್ಯೂಬ್‍ಲೈಟ್ ಸೆಕೆಂಡಿಗೆ ಎರಡು ಬಾರಿಯಂತೆ ಯಾರೂ ಏನೆ ಅಂದರೂ ಸರಿಯೇ ತನ್ನಪಾಡಿಗೆ ತಾನು ಕಣ್ಣುಹೊಡೆಯುತ್ತಾ ಇರುತ್ತದೆ.
ಅವರಿಗೆ ಅದು ಟೈಪಾಸ್ ಮಾಡುವ ಅಡ್ಡಾ, ಇವರಿಗೆ ಸರಸ್ವತಿಯ ಗುಡಿ, ಕೆಲವರಿಗೆ ವಿದ್ಯಾವಂತರು ಎನಿಸಿಕೊಳ್ಳುವ ತಾಣ, ಇನ್ನುಳಿದವರಿಗೆ ಅದು ಸಾರ್ವಜನಿಕ ನಿದ್ರಾಗೃಹ.
ಗಡಿಯಾರ ನೋಡಲು ತಲೆ ಎತ್ತಿದರೆ ದೊಡ್ಡಮುಳ್ಳು ಮುರಿದು ಚಿಕ್ಕ ಮುಳ್ಳು ಬಾಲ ಹಿಡಿದ ಸತ್ತ ಇಲಿಯಂತೆ ಜೋತಾಡುತ್ತಿರುತ್ತದೆ. ಪ್ಯಾನು ಜೇಡರಬಲೆಯಿಂದ ಸಿಕ್ಕಿಹಾಕಿಕೊಂಡು ಹೊರಬರಲು ಒದ್ದಾಡುತ್ತಿರುತ್ತದೆ. ಕುಡಿಯುವ ನೀರಿನ ಟಾಕಿ ನೆಪಕ್ಕೆ ಮಾತ್ರ ಮೂಲೆಯಲ್ಲಿ ಗ್ಲಾಸು ಕಳೆದುಕೊಂಡು ದಾಹ ತಣಿಸುವ ನಾಟಕ ಮಾಡುತ್ತಿರುತ್ತದೆ.
ಪತ್ರಿಕೆಯ ಮಧ್ಯಪುಟ ಅಲ್ಲೇಲ್ಲೋ ಟೇಬಲ್ ಕೆಳಗೆ ಅಡಗಿ ಕುಳಿತಿರುತ್ತದೆ. ಮುಖಪುಟದಲ್ಲಿ ದೇವೆಗೌಡನ ಪೋಟೊ ನೋಡುತ್ತಾ ಬಿಳಿ ನೆಹರು ಶರ್ಟಿನ ವ್ಯಕ್ತಿ ಮೀಸೆ ತಿರುವುತ್ತಾನೆ. ತುಂಡುಡುಗೆಯ ನಾಯಕಿಯ ದೇಹಸಿರಿ ನೋಡುತ್ತಾ ಮಗ್ನರಾಗಿರುತ್ತಾನೆ ಚಿಗುರುಮೀಸೆಯ ಹುಡುಗ. ಮೇಜಿನ ತುದಿಯಲ್ಲಿ ಯಾರೋ ಒಬ್ಬರು ಪುಸ್ತಕದ ಒಳಗೆ ‘ಆ ಪುಸ್ತಕ’ ಅಡಗಿಸಿ ರಕ್ತಸಂಚಲನ ಹೆಚ್ಚಿ  ಬೆವರು ಬರುವಂತೆ ಓದುತಿರುತ್ತಾನೆ ಅವಾಗವಾಗ ಆಜುಬಾಜು ಇರುವವರನ್ನು ನೋಡುತ್ತಾ.
ಓದುಗರಿಗೆ ಬರ ಬಿದ್ದು ಪ್ರಶಸ್ತಿ ಪಡೆದ ಪುಸ್ತಕಗಳು ಕಣ್ಣಿರು ಸುರಿಸುತ್ತಾ ಮೇಲಿನ ರ್ಯಾಕನಲ್ಲಿ ಅಸ್ಪøಶ್ಯರಂತೆ ಗೋಚರವಾಗಿತ್ತವೆ. ಓದಿ ಓದಿ ಸವೆದ ಪುಸ್ತಕಗಳು ಹೊಸ ಅಂಗಿ ಚಡ್ಡಿ ಹೊಲಿಸಿಕೊಡಿ ಎಂದು ಪಟ್ಟು ಹಿಡಿದಂತೆ ಮಧ್ಯದ ಸಾಲಿನಲ್ಲಿ ಅಡಗಿರುತ್ತವೆ ಮಾನ ಕಾಪಾಡಿಕೊಳ್ಳಲು. ಇಂಗ್ಲೀಷ್, ಹಿಂದಿ ಪುಸ್ತಕಗಳು ಮಾತ್ರ ಮಡಿ ಮೈಲಿಗೆ ಎಂಬಂತೆ ಯಾರಿಂದಲೂ ಮುಟ್ಟಿಸಿಕೊಳ್ಳಲಾಗದಂತ ಸ್ಥಿತಿಯಲ್ಲಿ ಆರಾಮವಾಗಿರುತ್ತವೆ.
ಗ್ರಂಥಪಾಲಕ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬಾಯಲ್ಲಿ ಕೆಂಪುರಸ ಉತ್ಪಾದನೆ ಮಾಡುತ್ತಾ ಮೂಡದ ಪೆನ್ನನ್ನು ಕಿವಿಗೆ ಸಿಕ್ಕಿಸಿಕೊಂಡು ತೂಕಡಿಸುತ್ತಿರುತ್ತಾನೆ. ಪೂಜಾರಿಯೇ ಮೈ ಮರೆತಿರುವಾಗ ಭಕ್ತರು ಯಾವ ಲೆಕ್ಕ..?
- ಸಂಗಮೇಶ ಡಿಗ್ಗಿ
ಮೊ : 8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಏಕಾಂಗಿಯೊಬ್ಬನ ದಾರಿಯ ಕವಲುಗಳು...

ಇಷ್ಟೂ ದೂರ ಸಾಗಿ ಬಂದರೂ ನಾನು ಇನ್ನು ಗುರಿ ಮುಟ್ಟೆ ಇಲ್ಲ ಎಂಬ ಕಠೋರ ಸತ್ಯ ಅರಿವಿಗೆ ಬರುವದು ಒಮ್ಮೆ ಕತ್ತು ತಿರುಗಿಸಿ ಹಿಂದೆ ನೋಡಿದಾಗ. ನಾವು ಅಂದುಕೊಂಡ ಕನಸು, ನಾವು ಕಟ್ಟಿಕೊಂಡ ಗುರಿಯನ್ನು ತಲುಪುವ ಹಾದಿಯಲ್ಲಿ ನೂರೆಂಟು ಕವಲುಗಳು, ತಗ್ಗುದಿನ್ನೆಗಳು ಹೆಡೆ ಬಿಚ್ಚಿ ಸ್ವಾಗತಿಸುತ್ತವೆ. ನಮ್ಮ ಮನಸಿನ ನಿರ್ಧಾರವನ್ನು ಕೇಳದೆ ಬೇರೆ ಯಾರದೋ ಮಾತಿಗೆ ನಮ್ಮ ಕನಸನ್ನು ಚಿವುಟಿ ಮತ್ತೊಬ್ಬರ ಕನಸಿಗೆ ಜೀತದಾಳಾಗಿ ದುಡಿಯುವ ಪರಿ ದಿಕ್ಕು ದೆಸೆಯಿಲ್ಲದೆ ಸುತ್ತುವ ದಿಕ್ಸೂಚಿಯಿಲ್ಲದ ಹಡಗಿನಂತಾಗುತ್ತದೆ. ನಾನು ಹೊಗುವ ದಾರಿ ನನಗೆ ಮಾತ್ರ ಸ್ಪಷ್ಟವಾಗಿ ಕಾಣುತ್ತದೆ ಹೊರತು ಬೇರೆ ಯಾರಿಗೂ ಅಲ್ಲ. ಅದು ಎಂದಿಗೂ ಕವಲೊಡೆದು ಅಪರಿಚಿತ ಊರಿಗೆ ಹೋಗುವದಿಲ್ಲ. ಅಂದುಕೊಂಡ ಗೂಡಿಗೆ ನಮ್ಮನ್ನು ಕರೆದೊಯ್ಯುತ್ತದೆ. ಅಲ್ಲಿ ನಮಗಾಗಿ ಸುಖ ಸಂತೋಷದ ನಿಧಿ ಕಾದು ಕೂತಿರುತ್ತದೆ. ನಾನು ಸಾಗುವ ಹಾದಿಯಲ್ಲಿ ಮುಳ್ಳಿದೆ ಅಂತ ಗೊತ್ತಿದ್ದರೂ ಅದು ನನಗೆ ಅಚ್ಚುಮೆಚ್ಚಿನ ಹಾದಿಯಾಗಿರುತ್ತದೆ. ಅಲ್ಲಿ ನನಗಾಗಿ ಹೂವು ಹಾಸಿಗೆ ಹಾಸಿರುತ್ತದೆ. ತಂಪು ತಂಗಾಳಿಯ ಜೊತೆ ನೆರಳು ನೀಡುತ್ತದೆ. ಅದಕ್ಕೆ ನಾನು ಮಾಡಬೇಕಾದದ್ದು ಇಷ್ಟೇ, ನನಗಾಗಿ ನಾನು ಬದುಕುವದು. ಇದು ಒಂತರಾ ಸ್ವಾರ್ಥ ಎನಿಸಿದರೂ ಪರರಿಗೋಸ್ಕರ ದಿನಗಟ್ಟಲೆ ವ್ಯಯಿಸುವ ನಾನು ನನಗೋಸ್ಕರ ಒಂದಷ್ಟು ಸಮಯ ಕೊಡುವದರಲ್ಲಿ ಏನು ತಪ್ಪಿದೆ..? ಅದೇ ಸಂತೆಯ ಪರಿಚಿತವಿರುವ ಮಂದಿಯ ನಡುವೆ ನಮ್ಮ ದಾರಿ ಸಿಕ್ಕು ದಿಕ್ಕಾಪಾಲಾಗಿ ದಡ

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ

ಜನರಲ್ ಬೋಗಿಯಂಬ ವೈವಿಧ್ಯಮಯ ತಾಣ...

‘ಯುವರ್ ಅಟೇಕ್ಷನ್ ಪ್ಲೀಸ್ ಹುಬ್ಬಳ್ಳಿ ಟೂ ಸೋಲಾಪೂರ ಪ್ಯಾಸೆಂಜರ್ ಟ್ರೇನ್ ಅರೈವಲ್” ಗಾನ ಮೊಳಗಿಸುತ್ತಾ ಮೈಕ್ ಎಚ್ಚರಿಸುತ್ತಿದ್ದಂತೆ ತಮ್ಮ ತಮ್ಮ ಬ್ಯಾಗ್‍ಗಳನ್ನು ಎತ್ತಿಕೊಂಡು, ಮಕ್ಕಳ ಕೈ ಹಿಡಿದು, ಜೊತೆ ಬಂದವರಿಗೆ ಗುಡ್ ಬೈ ಹೇಳಿ ಬೋಗಿಯೊಳಗೆ ಕಾಲಿಡುವ ಮಂದಿ ಇರುವೆಗಳು ಸಕ್ಕರೆಗೆ ಮುತ್ತಿಕ್ಕುವಂತೆ ಕಾಣುತ್ತದೆ. ಕೆಲಸದ ಬೇರೆ ಊರಿಗೆ ತೆರಳುವವರು, ಅಪ್ಪಅಮ್ಮನನ್ನು ಕಾಣಲು ತೆರಳುವವು, ಹೆಂಡತಿಯ ಊರಿಗೆ, ಸ್ನೇಹಿತರ ಮಧುವೆ ಮುಂಜಿಗೆ, ಇಲ್ಲಾ ಸಂಬಂಧಗಳನ್ನು ಕಡಿದುಕೊಂಡು ಪರವೂರಿನಲ್ಲಿ ನೆಲೆ ಕಾಣಲು, ಹಲವಾರು ಕಾರಣಗಳನ್ನು ಇಟ್ಟುಕೊಂಡು ಬಂದ ಪ್ರಯಾಣಿಕರು ಸೀಟು ಹಿಡಿಯುವ ಧಾವಂತದಲ್ಲಿ ಇದ್ದರೆ ಕಂಕಳಲ್ಲಿ ಕುಳಿತ ಮಗು ಬೆರಗುಗಣ್ಣಿನಿಂದ ಕಿಟಕಿಯತ್ತ ಕಣ್ಣು ಹಾಯಿಸುತ್ತದೆ. ಜಾತೀಗೀತಿಯ ಬಂಧನವನ್ನು ಕಾಣದ ಏಕೈಕ ಸ್ಥಳವೆಂದರೆ ಅದು ರೈಲು ಬೋಗಿ. ಪಕ್ಕದವನ ಜಾತಿಯನ್ನು ಕೇಳದೆ ಮೈ ಅಂಟಿಸಿಕೊಂಡು ನಿಟ್ಟುಸಿರು ಬಿಡುತ್ತಾ ತಮ್ಮದೆ ಯೋಚನಾ ಲಹರಿಯಲ್ಲಿ ಮುಳುಗಿ ಬಟ್ಟೆಗಳನ್ನು ಸರಿಮಾಡಿಕೊಳ್ಳುತ್ತಾರೆ. ಸುತ್ತಲು ಒಮ್ಮೆ ಕಣ್ಣು ಹಾಯಿಸಿದರೆ ಸೂಟುಬೂಟು ಹಾಕಿಕೊಂಡ ಶ್ರೀಮಂತ, ದೊಗಳೆ ಅಂಗಿ ಧರಿಸಿದ ಮದ್ಯಮ ಕುಟುಂಬ ವ್ಯಕ್ತಿ, ಧೊತರಕ್ಕೆ ನೀಲಿಬಳಿದುಕೊಂಡ ಹಳ್ಳಯ ಹಿರಿಯ, ದಾಡಿ ಬಿಟ್ಟ ಮುಲ್ಲಾ, ಆಗ ತಾನೆ ಮಧುವೆಯಾದ ಜೋಡಿಗಳು, ಹಳ್ಳಿ ಹೆಂಗಸರು, ಚಿಕ್ಕಮಕ್ಕಳು, ಅಷ್ಟೆ ಅಲ್ಲದೆ ಬಿಸ್ಕಿಟ್ ಮಾರುವವವರು, ಬಿಕ್ಷುಕರು, ಚಪ್ಪಾಳೆ ತಟ್ಟುವ ಮಂಗಳಮು