ವಿಷಯಕ್ಕೆ ಹೋಗಿ

ಚಡ್ಡಿದೋಸ್ತ್ ಚಂದಪ್ಪನ ದರುಶನ..!


ಹುಣ್ಣಿಮೆಯ ರಾತ್ರಿಯಲ್ಲಿ ಒಂಟಿಯಾಗಿ ನಡೆಯುತ್ತಿರುವಾಗ ನನಗೆ ಗೊತ್ತಿಲ್ಲದೆ ನನ್ನನ್ನು ಹಿಂಬಾಲಿಸಿ ಬರುತಿದ್ದ ಚಂದಪ್ಪ ನನ್ನ ಚಡ್ಡಿದೋಸ್ತ್ ಆಗಿ ಬಹಳ ವರ್ಷವೇ ಆಗಿದೆ. ಅಜ್ಜಿ ಹೇಳುತ್ತಿದ್ದ ಮೊಲ ಮತ್ತು ಚಂದಪ್ಪನ ಕಥೆ ನನ್ನೆದೆಯೊಳಗೆ ಅಚ್ಚಾಗಿ ಉಳಿದು ತುಕ್ಕು ಹಿಡಿಯುವ ಸ್ಟೇಜ್‍ಗೆ ಬಂದು ನಿಂತಿದೆ. ಹೇಗಾದರೂ ಸರಿಯೇ ಮೊಲ ಜಿಗಿದಾಡುವದನ್ನು ನೋಡಲೇಬೇಕು ಎಂಬ ತವಕದಿಂದ ಅನೇಕ ಹುಣ್ಣಿಮೆಗಳನ್ನು ಮಾಳಿಗೆಯ ಮೇಲೆ ಆಚರಿಸಿದ್ದೆನೆ. ಚಳಿಯಲ್ಲಿ ನಡುಗಿ ಹಿಪ್ಪೆಯಾಗಿ ಹೋದರು ಮೊಲ ಮಾತ್ರ ಕದಲದೆ ‘ಸ್ಟಾಚು’ ತರ ಸ್ಟಿಲ್ ಆಗಿರತಿತ್ತು.
ಶಾಲೆಯಲ್ಲಿ ಮಾಸ್ತಾರ ಪಾಠ ಮಾಡುವಾಗ ಚಂದಪ್ಪನ ಮೇಲೆ ಮಾನವ ಕಾಲಿಟ್ಟ ಚಿತ್ರವನ್ನು ತೋರಿಸಿ ವಿವಿರಿಸುತಿದ್ದಾಗ ನನಗೆ ಆ ಬೂಟುಗಾಲು ಬಲಗಾಲಿನದೋ ಎಡಗಾಲಿನದೂ ಎನ್ನುವ ಪ್ರಶ್ನೆ ಉದ್ಭವಿಸಿ ಕೇಳಿದಾಗ ಆಕಡೆಯಿಂದ ಬಂದ ಕೈ ನನ್ನ ಮುಸುಡಿಯನ್ನು ಕೆಂಪಗಾಗಿಸಿ ದಪ್ಪಮಾಡಿಬಿಟ್ಟಿತು.
ಪುಸ್ತಕದಲ್ಲಿ ಆತನ ನಾನಾ ಬಗೆಯ ಚಿತ್ರಗಳನ್ನು ನೋಡುತ್ತಾ, ಅಜ್ಜಿಯ ಕಥೆಗಳಿಂದ ಪ್ರೇರಣೆಯಾಗಿ, ಮಾಯಾಲೋಕದ ಕಿನ್ನರಿಗಳ ಆಟದ ಅಂಗಳವಾಗಿರುವ ಚಂದಪ್ಪನನ್ನು ಆತನ ಬೆನ್ನು, ಕೈ, ಕಾಲುಗಳನ್ನು ಸೂಕ್ಷ್ಮವಾಗಿ ನೋಡಬೇಕು ಎನ್ನುವ ಕೂತುಹಲ ನನ್ನನ್ನು ಅನೇಕ ಸಲ ಜೀವ ಹಿಂಡಿಸುತಿತ್ತು.
ಚಂದಪ್ಪ ಕೆಲವೊಬ್ಬರಿಗೆ ಪ್ರೀತಿಯ ಗೆಳೆಯ, ಕೆಲವರಿಗೆ ಒಲುಮೆಯ ಪ್ರಿಯತಮ, ಚಿಕ್ಕ ಮಕ್ಕಳಿಗೆ ಪ್ರೀತಿಯ ಚಂದಮಾಮ, ತಾಯಿಂದಿರಿಗೆ ಮಕ್ಕಳನ್ನು ಉಣಿಸಲು ಇರುವ ಸಾಧನ, ವಿರಹಿಗಳಿಗೆ ಹೊಟ್ಟೆಕಿಚ್ಚು, ಪ್ರೇಮಿಗಳಿಗೆ ತಮ್ಮ ಪ್ರೀತಿಪಾತ್ರದವರ ಮುಖಗಳನ್ನು ಕಾಣುವ ಕನ್ನಡಿ, ವಿಜ್ಞಾನಿಗಳಿಗೆ ಧೂಳ್ಮಣ್ಣಿನ ಉಂಡೆ. ಕವಿಗಳಿಗೆ ಸ್ಪೂರ್ತಿಯ ಸಿಂಚನ, ಭೂಮಿಗೆ ಅದು ಬರೀ ಉಪಗ್ರಹ.
ಗ್ರಹಣ ಹಿಡಿಯುವ ಸಂದರ್ಭದಲ್ಲಿ ರಾಹುಕೇತುಗಳು ಚಂದಮಾಮಮನನ್ನು ತಿಂದು ಹಾಕುತ್ತಾರೆ ಎಂದು ಅಜ್ಜಿ ಕಥೆ ಹೇಳಿದಾಗ ನನಗೆ ಈ ರಾಹುಕೇತುಗಳು ಭಯಂಕರ ರಾಕ್ಷಸರಂತೆ ಕಂಡರು. ಅವತ್ತು ಗ್ರಹಣ ಹಿಡಿಯುವಾಗ ಸೂಪರ್‍ಮ್ಯಾನ್ ಬಂದು ಈ ರಾಹುಕೇತುಗಳನ್ನು ಸಾಯಿಸಿ ಚಂದಪ್ಪನನ್ನು ರಕ್ಷಿಸಬಾರದೇ ಎಂದು ಡಿಡಿ ಒನ್ ಚಾನಲ್ ಮುಂದೆ ಊದಿನಕಡ್ಡಿಯ ನೈವಿದ್ಯೆ ಇಡುತ್ತಿದ್ದೆ. ಆದರೆ ಅದೆ ಚಾನಲ್‍ನ ವಾರ್ತೆಗಳಲ್ಲಿ ಚಂದಪ್ಪ ಕರಗಿಹೋಗುತ್ತಿದ್ದುದನ್ನು ಕಾಟನ್ ಸಾರಿ ತೊಟ್ಟ ಆಂಟಿ ನುಲಿದು ಹೇಳುತ್ತಿದ್ದಳು.
ಅವಾಗಿನಿಂದ ಚಂದಪ್ಪನನ್ನು ನೋಡಬೇಕೆನ್ನುವ ಕಾತರವಿತ್ತು. ಅವತ್ತು ಕವಿವಿಯ ಪ್ರಾದೇಶಿಕ ಕೇಂದ್ರದಲ್ಲಿ ‘ಕನ್ನಡದಲ್ಲಿ ವಿಜ್ಞಾನದ ಬರವಣಿಗೆ’ ಕಾರ್ಯಗಾರದಲ್ಲಿ ಭಾಗವಹಿಸಿದಾಗ ಅಂತಹ ಸುರ್ವಣ ಅವಕಾಶ ಒದಗಿಬಂತು.
7 ಗಂಟೆ ಹೊಡೆಯುತಿದ್ದಂತೆ ಎಲ್ಲರೂ ಟೆರಸ್‍ಗೆ ಹಾಜರಾಗಿ ಆಕಾಶ ನೋಡತೊಡಗಿದೆವು. ಬರೀ ಕತ್ತಲು, ಅಲಲ್ಲಿ ಚುಕ್ಕೆಗಳ ಕಾರುಭಾರು, ಮೋಡಗಳ ಹಾವಳಿಯಿಂದ ತಪ್ಪಿಸಿಕೊಳ್ಳುಲು ಹವಣಿಸುತಿದ್ದ ಚಂದಪ್ಪ.
ಗುಂಡಗೆ ಬ್ಯಾರಲ್‍ನಂತೆ ತಗಡಿನಿಂದ ಮಾಡಿದ ಡಬ್ಬಿಯೊಳಗೆ ಮಾಸ್ತಾರ ಮೊದಲು ಕಣ್ಣು ತುರುಕಿಸಿ ಅದೇನೆನೂ ತಿರುಗಿ ಬರ್ರಿ ನೋಡಬರ್ರಿ ಅಂದಾಗ ಹುಡುಗರೆಲ್ಲರು ಹುಯ್ಯಿದುಯ್ಯಿ ಅಂತ ಕುರಿದೊಡ್ಡಿಗಳ ಸಾಮ್ಯಾಜ್ಯದಂತೆ ನೂಕುನುಗ್ಗಲು ಮಾಡಿತೊಡಗಿದರು. ಇಷ್ಟು ವರ್ಷ ಕಾದ ನಾನು ಬರೀ ಐದು ನಿಮಿಷ ಕಾದು ಸಾವಕಾಶವಾಗಿ ಚಂದಪ್ಪನನ್ನು ನೋಡಬೇಕು ಎಂದು ಲಾಸ್ಟ್‍ಲಿಸ್ಟ್‍ನ ಲಾಸ್ಟ್ ಪರ್ಸನ್ ಆಗಿ ನಿಂತೆ. ಒಬ್ಬೊಬ್ಬರಾಗಿ ಬಗ್ಗಿ ನೋಡಿ ಹೋದಾಗ ಅದೇನೂ ಸ್ವರ್ಗ ಇಣುಕಿ ನೋಡಿದವರಂತೆ ಒಬ್ಬರಿಗೊಬ್ಬರು ಕಟ್ಟುಕಥೆಗಳನ್ನು ಹೇಳುತ್ತಿದ್ದರು. ನನ್ನ ಪಾಳಿ ಬಂದಾಗ ಮನದೊಳೆಗೆ ಅದೇನೋ ದುಗುಡ ಶುರುವಾಯಿತು. ‘ಮಗಧೀರ’ ಸಿನಮಾದ ಹೀರೋನಿಗ ಆದ ಪುನರ್ಜನದ ಅನುಭವದ ರೀತಿ.
ತಗಡು ಡಬ್ಬಿಯ ನಳಿಕೆಗೆ ಕಣ್ಣಾಡಿಸಿದಾಗ ವಿಸ್ಮಯ..! ನಾನು ಚಂದಪ್ಪನ ಅಂಗಳದಲ್ಲಿ ಇಳಿದು ಅದರ ನೆಲವನ್ನು ನೋಡುತಿದ್ದೇನೆ. ಅದು ಪಕ್ಕಾ ಸಣ್ಣ ಹುಡುಗ ವಾಂತಿ ಮಾಡಿದ ನೆಲದ ತರ ಕಾಣಿಸಿತು. ಮತ್ತೆ ನನಗೇನೂ ಬೇಕಾದ್ದು ಹುಡುಕಿದೆ ಸಿಗಲೇ ಇಲ್ಲ, ಅಜ್ಜಿ ಹೇಳುತ್ತಿದ್ದ ಮೊಲ. ಮೋಸ್ಟಲಿ ಅದು ಅಡಗಿ ಕುಂತಿರಬೇಕು ಎಂದು ಇನ್ನು ಜೂಮ್ ಮಾಡಿದಾಗ ಅನೇಕ ಪ್ಲೇಟ್‍ಗಳು ಚಲ್ಲಾಪಿಲ್ಲಿಯಾದಂತ ದೃಶ್ಯ ಕಂಡಿತು. ಅವುಗಳಿಗೆ ಚಂದಪ್ಪನ ಕಲೆಗಳು ಅಂತಾರೆ ಎಂದು ನಮ್ಮ ಮಾಸ್ತಾರ ಹೇಳಿದಾಗ ಕಾವ್ಯದಲ್ಲಿ ಸುಂದರವಾಗಿ ವರ್ಣನೆಗೊಂಡ ಚಂದಪ್ಪನಿಗೂ ಮೊಡವೆಗಳು ಬಂದಿವೆ ಎಂದು ಅರ್ಥವಾಯಿತು.
ಮತ್ತೆ ಮೊಲ ಎಲ್ಲಿಗೆ ಹೋಯಿತು?
ಬಹುಶಃ ಚಂದಪ್ಪನ ಮ್ಯಾಲ ಹೋದ ಮನುಷ್ಯ ಹಸಿವಾಗಿ ತಿನ್ನಲಿಕ್ಕೆ ತರಕಾರಿ ಸಿಗಲಿಲ್ಲ ಎಂದು ಮೊಲವನ್ನು ಬೇಟೆಯಾಡಿ ತಿಂದಿರಬಹುದೇ, ಅಲ್ಲಿ ನೀರು ಇಲ್ಲ ಎಂದು ಮೊಲ ಬೇರೆ ಗ್ರಹಕ್ಕೆ ಶಿಪ್ಟ್ ಆಗಿರಬಹುದೇ ಎನ್ನುವ ಕೊರಕಲು ಪ್ರಶ್ನೆಗಳು ಮೆದುಳನ್ನು ತಿನ್ನತೊಡಗಿದವು.
ಭೂಮಿಗೆ ಬೆಳಕು ನೀಡುವ ಚಂದಪ್ಪನ ಮೇಲೆ ಲೈಟಿನ ಕಂಬ ಇರಲೇಇಲ್ಲ. ಕೆ.ಇ.ಬಿ ಅಂತೂ ಕಾಣಲೆ ಇಲ್ಲ ಮತ್ತ ಅದಕ ಕರೆಂಟ್ ಹ್ಯಾಂಗ್ ಸಪ್ಲೈ ಆಗತಾದ ಅಂತ ತಲೆಯಲ್ಲಿ ಹುಳಬಿಟ್ಟು ಮಾಸ್ತಾರನ್ನು ಕೇಳಿದಾಗ ‘ನಿಮ್ಮಪ್ಪ ಚಿಮುಣಾ ಹಚ್‍ಕೋತಾ ಕುಂತಿರತಾನ’ ಅಂತ ಉತ್ತರ ಕೊಟ್ಟರು.
ಕಿನ್ನರರು ಈಜಾಡುವ ಚಿನ್ನದ ಕೊಳ, ಬಂಗಾರದ ಅರಮನೆ, ಮಾಯಾಪ್ರಪಂಚ ನೋಡುವ ನನ್ನ ಬಹುವರ್ಷಗಳ ಆಸೆ ಹೊತ್ತಿದ್ದೆ. ಇಲ್ಲಿ ನೋಡಿದರೆ ಬರೀ ಹಿಟ್ಟು ಚಲ್ಲಿದ ನೆಲ. ‘ನಮ್ಮಜ್ಜಿ ಪಿಂಡ’ ಅಕಿ ನನಗ ಸುಳ್ಳ ಕತಿ ಹೇಳ್ಯಾಳೆನು ಅಂತ ಅನುಮಾನ ಬಂದು ಬೊಚ್ಚುಬಾಯಿ ಮುದುಕಿ ಮೇಲೆ ಸಿಟ್ಟು ಬಂತು. ಪೋನ್ ಮಾಡಿ ಯಾಕ ಸುಳ್ಳು ಹೇಳಿದಿ ನಿನ್ನ ಮೇಲೆ  ಸಿಟ್ಟ ಬಂದಾದ ಅಂತ ಬೈದರೆ ‘ಸಿಟ್ಟು ಬಂದ್ರ ಹಿಟ್ಟು ಮುಕ್ಕು’ ಅಂತ ವೇದೋಫನಿಷತ್‍ಗಳನ್ನು ಉದುರಿಸಲು ಶುರು ಮಾಡಿದಳು.
ಚಂದಪ್ಪನ ಬಗ್ಗೆ ಅದೇನೋ ಹುಚ್ಚು ಕಲ್ಪನೆಗಳನ್ನು ಇಟ್ಟುಕೊಂಡ ನನಗೆ ಅವತ್ತು ಬರೀ ನಿರಾಶೆಯಾಯಿತು.
ಸಿದ್ದಾರ್ಥ ಬುದ್ದನಾದದ್ದು ಈ ಪೂರ್ಣಚಂದ್ರನ ದರುಶನದಿಂದಲ್ಲವೇ..? ನನ್ನನ್ನು ನಾನು ಸಂಪೂರ್ಣವಾಗಿ ಅರಿತಿದ್ದು ಇವನ ಗೆಳತನ ಮಾಡಿದಾಗ. ನನ್ನ ಈ ಎರಡು ವರ್ಷದ ಜೊತೆಗಾರನಾಗಿ ಚಂದಪ್ಪ ಯಾವಾಗಲೂ ನನ್ನ ಬೆನ್ನ ಹಿಂದೆಯೇ ನಿಂತಿದ್ದಾನೆ. ನಮ್ಮಿಬ್ಬರ ನಡುವೆ ಅನೇಕ ಮಾತುಕಥೆಗಳು ನಡೆದಿವೆ. ಬೇಸರವಾದಾಗ ಯಾವಾಗಲೂ ‘ಜೊತೆಗಿರುವನು’. ಖುಷಿಯಿಂದ ಇರಲು ಅವನೊಬ್ಬನೆ ಸಾಕು ನನಗೆ.
ದುಡ್ಡು, ಲವ್ವು, ಅಂಹಕಾರ, ಪ್ಯಾಶನ್ ಇತ್ಯಾದಿಗಳ ಹಂಗಿಲ್ಲದೆ ಅವನೊಟ್ಟಿಗೆ ದೋಸ್ತಿ ಬೆಳೆಸಿದ ನನಗೆ ಈ ಜಗದ ಮಾನವರ ವರ್ತನೆ ತಲೆ ಚಿಟ್ಟು ಹಿಡಿಸಿದೆ. ಬರೀ ಸ್ವಾರ್ಥಿಗಳು, ಕಪಟಿಗಳು, ಮಾನವರನ್ನು ಹಣದಂತೆ ನೋಡುವ ಕಳ್ಳ ಖದೀಮರು. ಆದರೆ ಚಂದಪ್ಪ ಹಾಗೇ ಅಲ್ಲ. ಎಲ್ಲಾ ಕಡೆಗೂ ಸಮನಾಗಿ ಬೆಳಕು ಹಂಚುವ ಮಹಾ ‘ಮಗಧೀರ’ ಆತ.
ನನ್ನ ಚಂದಪ್ಪನಿಗಾಗಿ ನನ್ನ ರಾತ್ರಿಯ ಬಹುಪಾಲು ನಿದ್ದೆಯನ್ನು ಹಾಳುಮಾಡಿದ್ದೆನೆ. ಕೆಲವೊಮ್ಮ ಟೈವಾಕ್ ಗುಡ್ಡದ ಮಾಮೂಲಿ ಜಾಗದಲ್ಲಿ ಮಲಗಿ ಚಂದಪ್ಪನನ್ನು ಬೆಳಗಿನ ಜಾವ 3 ರವರೆಗೆ ಜ್ವರ ಬಂದರೂ ನೋಡುತ್ತಾ ಮಲಗಿದ್ದು ಉಂಟು. ಇದು ನನಗೂ ಚಂದಪ್ಪನಿಗೂ ಇರುವ ನಂಟು.
ಲೇಖನ : ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಚ್ಚರವಿರುವುದು ಕನಸುಗಳು ಮಾತ್ರ

ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು. ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ. ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡ...

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ. ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ. ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ. ಕೊಟ್ಟಿಗೆಯಲ್ಲಿ ಧೂಳು ಬಡ...