ವಿಷಯಕ್ಕೆ ಹೋಗಿ

ಎಚ್ಚರವಿರುವುದು ಕನಸುಗಳು ಮಾತ್ರ






ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು.
ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ.
ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡಿಯಂತೆ ಕಾಣುವ ಕೋಣೆಯೊಳಗಗಡೆ ಧನಲಕ್ಷೀ ಕಿಲಕಿಲನೆ ನಗುತ್ತಾ ಡ್ರಾಯರಿನ ಒಳಗೆ ಬಂಧಿಯಾಗಿರುತ್ತಾಳೆ. ಹೆಗಲ ಮೇಲಿನ ಟವಲ್‍ನಿಂದ ಕೈ ಒರೆಸಿಕೊಂಡು ಚಕಚಕನೆ ನೋಟುಗಳನ್ನು ಎಣಿಸುತ್ತಾ ಲಾಭ-ನಷ್ಟ ತಿಳಿಯಲು ಕ್ಯಾಲ್ಕುಲೇಟರ್ ಬಟನ್‍ಗಳಿಗೆ ಕಚಗುಳಿ ಇಡಲು ತೋರುಬೆರಳು ಸಂತೋಷದಿಂದ ಕುಣಿಯುತ್ತದೆ. ಜಾತಿಕುಲವೆನ್ನದೆ ಊರೂರು ಅಡ್ಯಾಡಿ ಬಂದ, ಮಾಸಿಹೋದ ಅಕ್ಷರಗಳನ್ನು ನೆಪಮಾತ್ರಕ್ಕೆ ಹೊಂದಿರುವ ಐದು ರೂಪಾಯಿಯ ನೋಟು ಶೀಲ ಕಳೆದುಕೊಂಡ ಹೆಣ್ಣಿನಂತೆ ಡ್ರಾಯರಿನ ಮೂಲೆಯಲ್ಲಿ ಅಡಗಿ ಕಣ್ಣೀರು ಸುರಿಸುತ್ತಿರುತ್ತದೆ.
ಡ್ರೆಸಿಂಗ್ ರೂಂನಲ್ಲಿ ಎಳೆದಿರುವ ಹಗ್ಗಕ್ಕೆ ಕುಣಿದು ಸುಸ್ತಾದ ಬಟ್ಟೆಗಳು ಜೋತುಬಿದ್ದಿರುತ್ತವೆ ಬಾವಲಿಯ ಹಾಗೆ. ವೇಷ ತೊಡುವಾಗಿನ ತಾಳ್ಮೆ ಆತ್ಮಹತ್ಯೆ ಮಾಡಿಕೊಂಡು ಧಾವಂತದಲ್ಲಿ ಭಾರ ಕಳೆದುಕೊಳ್ಳುವಂತೆ ಬಟ್ಟೆ ಬಿಚ್ಚುತ್ತಿರುತ್ತಾರೆ. ‘ದೇಹವು ಮೂಳೆ ಮೌಂಸದ ತಡಿಕೆ’ ಎನ್ನುವ ಹಾಡು ಕಂಬಕ್ಕೆ ಬಿಗಿಯಾಗಿ ಕಟ್ಟಿದ ಮೈಕ್‍ನಿಂದ ಉದುರಿ ಬರುತ್ತದೆ. ಪಾತ್ರಧಾರಿಣಿಯ ‘ಕುಲುಕಾಟ’ಕ್ಕೆ ಮನಸೋತ ರಸಿಕ ಮಹಾಶಯ ಐದು ಬೆರಳ ಉಂಗುರು ತೋರಿಸು, ಹಲ್ಲು ಕಿರಿಯುತ್ತಾ ಶೃಂಗಾರ ಭಾವದ ಮುಖಹೊತ್ತು ‘ವ್ಯಾಪಾರ’ದ ಬಗ್ಗೆ ಮಾತಾಡಲು ತುದಿಗಾಲ ಮೇಲೆ ನಿಂತಿರುತ್ತಾನೆ. ಮನೆಗೆ ಬನ್ನಿ ಎಂದು ಊಟದ ಅಹ್ವಾನ ನಿಡುತ್ತಾನೆ ನೆಪಕ್ಕಾಗಿ.
ಜಗಮಗಿಸೋ ಬಟ್ಟೆಗಳನ್ನು ಹಾಕಿಕೊಂಡ ಪಾತ್ರಧಾರಿಗಳು ಕ್ಷಣಮಾತ್ರದಲ್ಲಿಯೇ ಶತಮಾನಗಳಷ್ಟು ಹಿಂದೆ ತೊಳೆದ ಟವಲ್ ಸುತ್ತುಕೊಂಡು ಮುಖ ತೊಳೆಯಲು ನುಗ್ಗಿ ಬೆಂಡಾದ ಡ್ರಂನ ಒಳಗೆ ಬೆಂಡಾದ ಚೊಂಬನ್ನು ಹುಡುಕುತ್ತಾರೆ. ಹೊಳೆಯುವ ಬೆಳಕಿನಲ್ಲಿ ಮೆತ್ತಿಕೊಂಡ ಮೇಕಪ್ ಕತ್ತಲ ಬಚ್ಚಲು ಸಂಧಿಯಲ್ಲಿ ಕಳಚಿ ಹೋಗುತ್ತದೆ ಮೋರಿ ನೀರಿನೊಳಗೆ ಸೇರಿಕೋಳ್ಳಲು.
ಹೊಟ್ಟಯಲ್ಲಿ ಹಸಿವು ಸಣ್ಣಗೆ ನಾಟಕ ಆರಂಭಿಸಿರುತ್ತದೆ. ಎಲ್ಲಿಯೋ ಇದ್ದ ಅನಾಮಧೇಯ ಪಾತ್ರಧಾರಿಗಳು ಬಂದು ಸೇರುವಷ್ಟರಲ್ಲಿ ಸ್ಟೋ ಮೇಲೆ ಇದ್ದ ಅನ್ನ ಅಚ್ಚ ಬಿಳಿಮಲ್ಲಿಗೆಯಂತೆ ಅಹ್ವಾನ ನೀಡುತ್ತದೆ. ಅದರ ಜೊತೆಗೆ ಸಾಂಬರ್ ಇಲ್ಲದೇ ಹೋದರೆ ಉಪ್ಪಿನಕಾಯಿ ಆದರೂ ಆದಿತೂ! ಅಲ್ಲಿ ಚಂದದ ದೃಶ್ಯ ಮೈಕೊಡವಿಕೊಂಡಿರುತ್ತದೆ. ಸಹಭೋಜನ ಮಾಡುತ್ತಾ ಅವರಿವರೂ ವೇಧಿಕೆಯಲ್ಲಿ ಮಾಡಿದ ತಪ್ಪನ್ನು ಅನುಕರಣೆ ಮಾಡುತ್ತಾ, ಕಾಲೆಳೆಯುತ್ತಾ, ಕಲೆಕ್ಷನ್ ನಷ್ಟದ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳದೆ ಯುದ್ಧಗೆದ್ದ ಅಲೆಕ್ಸ್‍ಗಾಂಡರ್ ತರ ಜಗದ ಒಡೆಯೆರೆಂಬಂತೆ ಸಂತೋಷ ಉಕ್ಕಿಸುತ್ತಿರುತ್ತಾರೆ. ಅಷ್ಟರಲ್ಲಿ ಅಯ್ಯೋ ಹಾಲು ಉಕ್ಕುತ್ತಿದೆ ಎಂದು ಪುಟ್ಟ ಒಲೆಯಲ್ಲಿ ಇಟ್ಟ ಹಾಲಿನ ಪಾತ್ರೆಯ ಕಡೆ ಧಾವಿಸುತ್ತಾಳೆ ನಟಿಮಣಿ. ಪುಟ್ಟ ಮಗು ಜಾತ್ರೆಯ ಕರಿಬಿಳಿ ಬೆಂಡುಬತ್ತಾಸನಂತಿರುವ ಹಾರ್ಮೋನಿಯಂ ಮೇಲೆ ಕೈಯಾಡಿಸುತ್ತಿರುತ್ತದೆ.
ಊಟವಾದ ಮೇಲೆ ಕೆಂಪಡಿಕೆಗೆ ಸುಣ್ಣ ಸೇರಿಸಿ ಅರಗಿ ತಿನ್ನಲು ಹಸಿರೆಲೆ ಪ್ಲಾಸ್ಟಿಕ್ ಕವರ್‍ನಿಂದ ಹೊರಬಂದು ದವಡೆಗಳಲ್ಲಿ ಸಣ್ಣಗಾಗುತ್ತದೆ. ಮತ್ತೊಬ್ಬ ಹಚ್ಚಿದ ಆರಿದ ಅರ್ಧ ಬಿಡಿಗೆ ಬೆಂಕಿ ಹಚ್ಚಲು ಬನಿಯನ್‍ನ ಜೇಬಿನೊಳಗೆ ಬಲಗೈ ಸೇರಿಸುತ್ತಾನೆ. ಸ್ಟಾರ್,ವಿಮಲ್,, ಗಾಯಚಾಪ ಹೆಸರಿರುವ ಬ್ರಾಂಡೆಡ್ ಗುಟುಕಾ ಚೀಟಿಗಳು ಒಬ್ಬರಿಂದ ಒಬ್ಬರಿಗೆ ವಿನಿಮಯವಾಗುತ್ತವೆ. ದುಶ್ಚಟವೆಂದೂ ದೂರವಿರುವ ಇನ್ನೊಬ್ಬ ಮೈಲುದೂರದಲ್ಲಿರುವ ಗೆಳತಿಯನ್ನು ನೆನಸಿಕೊಳ್ಳುತ್ತಾ ಪೋಸ್ಟರ್ ಮೇಲಿರುವ ಚಲುವೆಯ  ಮುಖನೋಡುತ್ತಾ ಮೈಮರೆತಿರುತ್ತಾನೆ.
ಕತ್ತಲನ್ನು ಸೀಳಿಬರುವ ರಾತ್ರಿಯಲ್ಲಿ ಇಡೀ ಊರಿಗೆ ಊರೇ ಮಲಗಿ ಗಾಡನಿದ್ರೆಯಲ್ಲಿದ್ದಾಗ ಎಚ್ಚರವಾಗಿದ್ದು ಬೀದಿದೀಪಗಳು ಮತ್ತು ಇವರ ಕನಸುಗಳು ಮಾತ್ರ.
-    ಸಂಗಮೇಶ ಡಿಗ್ಗಿ
8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಮೊಸರು ಮಾರುವ ಹುಡುಗನ ಸೈಕಲ್ ಮತ್ತು ಪ್ಲಾಶ್‍ಬ್ಯಾಕ್ ನೆನಪು

‘ಕಾಲನ ಕೈಗೆ ದೇವರು ಸೃಷ್ಟಿ ಮಾಡಿದ ಜಗತ್ತು ಉಳಿಯುವದಿಲ್ಲವೆಂದ ಮೇಲೆ ನಾವು ಯಾವ ಲೆಕ್ಕ’ ಏಲ್ಲೋ ಓದಿದ ಅಣಿಮುತ್ತು ಮೊನ್ನೆ ದುತ್ತನೆ ಮೆದುಳಿನಲ್ಲಿ ಗುಂಗಿ ಹುಳದಂತೆ ಕಾಡತೊಡಗಿತು. ಕಾರಣವಿಷ್ಟೇ, ಎಮ್.ಎ ಮುಗಿಯುವ ಸಮಯವೂ ಹೌದು, ಅದಕ್ಕಿಂತ ಮುಖ್ಯವಾಗಿ “ಆನಂದಮಾರ್ಗ ಆಶ್ರಮ” ತೊರೆಯಬೇಕಲ್ಲ ಎನ್ನುವ ನೋವು. ಆ ನೋವಿಗೆ ಕಾರಣವಾದವನು ದಿನಾಲೂ ಗಟ್ಟಿ ಕೆನೆ ‘ಮೊಸರು ಮಾರುವ ಹುಡುಗ’ ಮತ್ತು ಆತನ ‘ಸೈಕಲ್’. ಆ ಹುಡುಗ 7ನೇ ತರಗತಿ. ಯಲ್ಲಪ್ಪ ಮನ್ಸೂರ. ಸುಮಾರು 3 ಕಿ.ಮಿ ಸೈಕಲ್ ತುಳಿದು ಮೊಸರು ಮಾರುವ ಕಾಯಕ ಮಾಡುತ್ತಾನೆ. ಅದಕ್ಕಿಂತ ಹೆಚ್ಚಾಗಿ ಮುಂಜಾನೆಯ ಎಳೆ ಬಿಸಿಲಿನಲ್ಲಿ ಮಲಗಿದ್ದ ಹಾಸಿಗೆ ಹೊದ್ದು ಮಲಗಿದ್ದ ನನಗೆ ಎಚ್ಚರಿಸುವ ಅಲರಾಂ ಬೆಲ್ ಎಂತಲೇ ಹೇಳಬಹುದು. ಅವನ ಸೈಕಲ್ ಮಾಯಲೋಕದ ಕಿನ್ನರರು ತಮ್ಮ ವಾಹನಗಳಿಗೆ ಶೃಂಗಾರ ಮಾಡಿದಂತೆ ಗಾಲಿಗಳಿಗೆ ರಿಬ್ಬನ್ ಸುತ್ತಿ, ಯುದ್ಧಕ್ಕೆ ಸಿದ್ಧನಾಗಿದ್ದೆನೆ ಎನ್ನುವ ರೀತಿ ಭಾವುಟ ತೋರಿಸಿ, ಗೆಂಡೆಗಳನ್ನು ಗಾಳಿಗೆ ಹಾರಾಡಿಸುತ್ತಾ ಗಂಟೆ ಬಾರಿಸುವ ಗತ್ತು ನನ್ನನ್ನು ಬಾಲ್ಯದ ಪ್ಲಾಶ್‍ಬ್ಯಾಕ್‍ಗೆ ಕರೆದೊಯ್ಯುವಂತೆ ಮಾಡಿತ್ತು. ತೂತು ಬಿದ್ದು ಪುಕ್ಸಟ್ಟೆ ಅಂಡು ಕಾಣಿಸುವ ದೊಗಳೆ ಚಡ್ಡಿ ಹಾಕಿಕೊಳ್ಳುತ್ತಿದ್ದ ವಯಸ್ಸಿನ ಹುಡುಗ ನಾನಾಗಿದ್ದೆ. ‘ಮೊದ ಮೊದಲು ಕೊಂಡ ಹೀರೋ ಸೈಕಲ್’ ಎಂಬತೆ ಪುಟ್ಟ ಸೈಕಲ್ ನಮ್ಮ ಮನೆಯ ಅಂಗಳವನ್ನು ಅಲಂಕರಿಸಿತ್ತು. ಇಡೀ ಊರಿಗೆ ಮೊದಲ ಸೈಕಲ್. ಊರಿನ ಜನ ಬಂದು ಅದನ್ನು ಮೈಸೂರ...

ಚಂದಿರನಲ್ಲದೇ ನಿನಗೇನು ಕೊಡಲಿ ನಾನು..!

ಅವಳು, ಆಕೆ ಬಳಕಿದರೆ ಬಾತುಕೋಳಿಯ ಮೈಯವಳು, ದುಂಡುಮುಖ, ಗಿಣಿಯನ್ನು ನಾಚಿಸುವ ಮೂಗು, ಗಾಳಿ ಬೆಳಕನ್ನುಂಡು ಉಬ್ಬಿಕೊಂಡ ಗಲ್ಲಗಳು, ಅರಳಿ ನಿಶ್ಚಲವಾಗಿ ಕಾಡಿಸುವ ಮುಗ್ಧ ಕಣ್ಣುಗಳು, ಅಲ್ಲಲಿ ಇಳಿಬಿದ್ದಿರುವ ಮುಂಗುರುಳಿನವಳು, ಹೃದಯಕ್ಕೆ ಬೆಂಕಿ ಹಚ್ಚಿ ಮಾಯವಾಗುವ ಪ್ರೇಮಲೋಕದ ರಾಜಕುಮಾರಿಯಂತವಳು, ಬರಗಾಲ ಬಿದ್ದ ನೆಲಕ್ಕೆ ತಂಪೆರೆಯುವ ಮಳೆ ಸುರಿದವಳು, ಮಿನಾಕ್ಷೀ ಚೌಕ್‍ನ ಪ್ರತಿಯೊಂದು ಕಲ್ಲುಕಲ್ಲಿನಲ್ಲಿಯೂ ಕಾಣಿಸಿದವಳು, ಕಾಡಿಸಿದವಳು, ಹೃದಯಕ್ಕೆ ತೂತು ಕೊರೆದವಳು, ಕ್ಲಾಸ್‍ಲ್ಲಿ ಜುಮುಕಿಗಳನ್ನು ಅಲುಗಾಡಿಸುತ್ತಾ, ಕಾಲ್ಗೆಜ್ಜೆಯ ಸದ್ದುಮಾಡುತ್ತಾ ನಡೆದಾಡುವ ನವಿಲಿನಂತವಳು, ಅದಕ್ಕೂ ಮೀರಿ ಧಿಮಾಕಿನ ರಾಣಿಯ ವಂಶದವಳು. ಅವಳಿಗೆ ನಾನು ಪ್ರೀತಿಯಿಂದ ಆಂಬ್ಯುಲೆನ್ಸ್ ಎಂದು ಕರೆಯುತ್ತಿದ್ದೆ. ಅದಕ್ಕೂ ಒಂದು ಕಾರಣವಿದೆ. ಕೋಚಿಂಗ್‍ಗೆ ಬಿಜಾಪೂರಕ್ಕೆ ಬಂದಾಗ ಗೋಲಬುಂಬಜ್‍ದ ಹಾಗೆ ನನ್ನನ್ನು ಸೆಳೆದವಳು ಅವಳು. ನನ್ನ ಹೃದಯದ ಪ್ರತಿ ಕೋಣೆಯಲ್ಲಿಯೂ ಅವಳ ನೆನಪು ಪ್ರತಿದ್ವನಿಸುತ್ತಿದೆ ಒಂದಲ್ಲಾ ಎಳೇಳು ಸಾರಿ...! ಕ್ಲಾಸ್‍ಲ್ಲಿ ಪ್ಯಾನಿಗಾಗಿ ನಡೆದ ಜಿದ್ದಾಟದಲ್ಲಿ ಗೆದ್ದವಳು ನೀನಲ್ಲವೇ ನನ್ನವಳು. ಅವಳ ಗೆಲ್ಲುವ ಹಠಮಾರಿತನಕ್ಕೆ ಸೋತು ಹೋದ ಹುಚ್ಚು ಪೋರ ನಾನು. ಅವಳ ಒಂದು ನಗುವಿಗಾಗಿ, ವಾರೆಗಣ್ಣಿನ ನೋಟಕ್ಕಾಗಿ, ಕೈಬೆರುಳುಗಳ ಉಂಗುರಗಳ ದರ್ಶನಕ್ಕಾಗಿ, ಇತಿಹಾಸದ ಪೀರಿಯಡ್‍ಲ್ಲಿಯೂ ವಾಕರಿಕೆ ತರುವಷ್ಟು ಭವಿಷತ್‍ಕಾಲದ ಕನಸು ಕಾಣುತ್ತಿದ್ದವನು ನ...