ವಿಷಯಕ್ಕೆ ಹೋಗಿ

ಮಸ್ತಕಕ್ಕಿಳಿಯುವ ಪುಸ್ತಕದ ಆಲಯದೊಳಗೆ...

ಗ್ರಂಥಾಲಯ ಜೀವಂತ ದೇವಾಲಯ ಎನ್ನುವ ಬೋರ್ಡಿನ ಕೆಳಗೆ ಪ್ರವೇಶಿಸಿದಾಗ ಆಳೆತ್ತರ ಏಳೆಂಟು ಕಪಾಟುಗಳು ಕಣ್ಣಿಗೆ ಬೀಳುತ್ತವೆ. ನೀಟಾಗಿ ಪುಸ್ತಕಗಳನ್ನು ಜೋಡಿಸುವದೆಂದರೆ ಓದುಗರಿಗೆ ಅದೆಷ್ಟೂ ಹಿಂಸೆನೋ..? ಅಡ್ಡಾದಿಡ್ಡಿಯಾಗಿ ಕಾಲುಜಾರಿ ಬಿದ್ದ ಪುಸ್ತಕಗಳ ಸಾಲಿನಲ್ಲಿ ಇಷ್ಟವಾದದನ್ನು ಹುಡುಕುವಾಗ ಧೂಳು ಮೂಗಿನ ಹೊಳ್ಳೆಯೊಳಗೆ ಲಬಕ್ಕೆನೆ ಹೊಕ್ಕೆ ಗಬಕ್ಕನೇ ಸೀನುವಂತೆ ಮಾಡುತ್ತದೆ.
ಕತೆಯ ಪುಸ್ತಕ ಎಂದು ಬರೆದ ರ್ಯಾಕ್‍ನಲ್ಲಿ ಹಳೆಯ ಕಾದಂಬರಿಗಳ ರಾಶಿ ಇರುತ್ತದೆ. ವಿಜ್ಞಾನ ಎಂದ ಕಡೆ ಕವನ ಸಂಕಲನದ ಗುಚ್ಛಗಳು ಓದಲು ಮೈ ತೆರೆದುಕೊಂಡು ನಿಂತಿರುತ್ತವೆ. ರಟ್ಟು ಹರಿದು ಹೋಗಿ ಹೆಸರು ಮರೆತ ಅನಾಥ ಬುಕ್ಕುಗಳೂ ಆಶಾಭಾವನೆ ಹೊತ್ತುಕೊಂಡು ಬದುಕುತ್ತಿರುತ್ತವೆ.
ಯಾರೋ ಬರೆದ ಅನುಭವದ ಸಾಲುಗಳು ಮತ್ಯಾರಿಗೋ ಇಷ್ಟವಾಗಿ ಹಸಿರು,ಕೆಂಪು ಪೆನ್ನಿನ ಮಾರ್ಕುಗಳನ್ನು ಅಂಟಿಸಿಕೊಂಡು ಫೋಕಸ್ ಆಗುತ್ತವೆ. ಮತ್ತೇ ಅಲ್ಲಲ್ಲಿ ಟೀಕೆ-ಟಿಪ್ಪಣಿಯ ವಿಮರ್ಶೆ ಕೂಡಾ ಇರುತ್ತದೆ. ಪ್ರೇಮಗವನಕ್ಕೆ ಹುಡುಗಿಯ ಇಂಗ್ಲೀಷ್ ಕ್ಯಾಪಿಟಲ್ ಲೆಟರ್‍ನ್ನು ದೊಡ್ಡಾದಾಗಿ ಬಿಡಿಸಿ ಕನಸುಗಳಿಗೆ ಜಾರಿಹೋಗುವ ಸಂಭವವೂ ಸಾಕಷ್ಟು ಪುಸ್ತಕದಲ್ಲಿ ಗೋಚರವಾಗುತ್ತವೆ.
ರೋಚಕವಾಗಿ ಓದಿಸಿಕೊಳ್ಳುತ್ತಾ ಸಾಗುವ ಕಾದಂಬರಿ ಇನ್ನೇನು ಕ್ಮೈಮ್ಯಾಕ್ಸ್ ಸ್ಟೋರಿಯ ಕಡೆ ಬಂದಾಗ ಯಾರೋ ಹಾಳೆ ಕಿತ್ತುಕೊಂಡು ಹೋಗಿರುವದನ್ನು ಕಂಡು ಸಾಂಭಾರ ಇಲ್ಲದೇಯೇ ಮಸಾಲದೋಸೆ ತಿಂದ ಅನುಭವವಾಗುತ್ತದೆ. ಹಾಳೆ ಕಿತ್ತಿದವನನ್ನು ಮನದಲ್ಲಿ ಅವನ ಮತ್ತು ಅವನ ಇಡೀ ವಂಶವನ್ನೇ ಜಾಲಾಡಿಸುವಂತೆ ಸಿಟ್ಟು ಉಕ್ಕಿ ಎದುರಿನ ಟೇಬಲ್‍ಗೆ ರಪ್ಪಕ್ಕನೇ ಮುಷ್ಟಿಯಿಂದ ಗುದ್ದಿ ಇತರರು ನಮ್ಮ ಕಡೆ ನೋಡುವಂತೆ ಮಾಡುತ್ತೇವೆ.
ಗೊರಕೆಯ ಸಪ್ಪಳ, ಮೇಸೆಜ್‍ನ ಟ್ಯೂನ್, ಪರಪರ ತಿರುಗಿಸುವ ಹಾಳೆಗಳ ಸದ್ದು ಶಾಂತವಾಗಿ ಓದುತ್ತಿದ್ದ ವಿಶ್ವಾಮಿತ್ರನ ತಪ್ಪಸ್ಸಿಗೆ ಮೇನಕೆಯ ಹಾಗೇ ಭಂಗ ಮಾಡುತ್ತವೆ. ಅಂಗವಿಕಲ ಕುರ್ಚಿ ಅಲುಗಾಡುತ್ತಾ ಧ್ಯಾನಕ್ಕೆ ಅಡ್ಡಿ ಮಾಡುವಲ್ಲಿ ಯಶಸ್ವಿಯಾಗುತ್ತೆ. ಒಬೆರಾಯನ ಕಾಲದ ಟ್ಯೂಬ್‍ಲೈಟ್ ಸೆಕೆಂಡಿಗೆ ಎರಡು ಬಾರಿಯಂತೆ ಯಾರೂ ಏನೆ ಅಂದರೂ ಸರಿಯೇ ತನ್ನಪಾಡಿಗೆ ತಾನು ಕಣ್ಣುಹೊಡೆಯುತ್ತಾ ಇರುತ್ತದೆ.
ಅವರಿಗೆ ಅದು ಟೈಪಾಸ್ ಮಾಡುವ ಅಡ್ಡಾ, ಇವರಿಗೆ ಸರಸ್ವತಿಯ ಗುಡಿ, ಕೆಲವರಿಗೆ ವಿದ್ಯಾವಂತರು ಎನಿಸಿಕೊಳ್ಳುವ ತಾಣ, ಇನ್ನುಳಿದವರಿಗೆ ಅದು ಸಾರ್ವಜನಿಕ ನಿದ್ರಾಗೃಹ.
ಗಡಿಯಾರ ನೋಡಲು ತಲೆ ಎತ್ತಿದರೆ ದೊಡ್ಡಮುಳ್ಳು ಮುರಿದು ಚಿಕ್ಕ ಮುಳ್ಳು ಬಾಲ ಹಿಡಿದ ಸತ್ತ ಇಲಿಯಂತೆ ಜೋತಾಡುತ್ತಿರುತ್ತದೆ. ಪ್ಯಾನು ಜೇಡರಬಲೆಯಿಂದ ಸಿಕ್ಕಿಹಾಕಿಕೊಂಡು ಹೊರಬರಲು ಒದ್ದಾಡುತ್ತಿರುತ್ತದೆ. ಕುಡಿಯುವ ನೀರಿನ ಟಾಕಿ ನೆಪಕ್ಕೆ ಮಾತ್ರ ಮೂಲೆಯಲ್ಲಿ ಗ್ಲಾಸು ಕಳೆದುಕೊಂಡು ದಾಹ ತಣಿಸುವ ನಾಟಕ ಮಾಡುತ್ತಿರುತ್ತದೆ.
ಪತ್ರಿಕೆಯ ಮಧ್ಯಪುಟ ಅಲ್ಲೇಲ್ಲೋ ಟೇಬಲ್ ಕೆಳಗೆ ಅಡಗಿ ಕುಳಿತಿರುತ್ತದೆ. ಮುಖಪುಟದಲ್ಲಿ ದೇವೆಗೌಡನ ಪೋಟೊ ನೋಡುತ್ತಾ ಬಿಳಿ ನೆಹರು ಶರ್ಟಿನ ವ್ಯಕ್ತಿ ಮೀಸೆ ತಿರುವುತ್ತಾನೆ. ತುಂಡುಡುಗೆಯ ನಾಯಕಿಯ ದೇಹಸಿರಿ ನೋಡುತ್ತಾ ಮಗ್ನರಾಗಿರುತ್ತಾನೆ ಚಿಗುರುಮೀಸೆಯ ಹುಡುಗ. ಮೇಜಿನ ತುದಿಯಲ್ಲಿ ಯಾರೋ ಒಬ್ಬರು ಪುಸ್ತಕದ ಒಳಗೆ ‘ಆ ಪುಸ್ತಕ’ ಅಡಗಿಸಿ ರಕ್ತಸಂಚಲನ ಹೆಚ್ಚಿ  ಬೆವರು ಬರುವಂತೆ ಓದುತಿರುತ್ತಾನೆ ಅವಾಗವಾಗ ಆಜುಬಾಜು ಇರುವವರನ್ನು ನೋಡುತ್ತಾ.
ಓದುಗರಿಗೆ ಬರ ಬಿದ್ದು ಪ್ರಶಸ್ತಿ ಪಡೆದ ಪುಸ್ತಕಗಳು ಕಣ್ಣಿರು ಸುರಿಸುತ್ತಾ ಮೇಲಿನ ರ್ಯಾಕನಲ್ಲಿ ಅಸ್ಪøಶ್ಯರಂತೆ ಗೋಚರವಾಗಿತ್ತವೆ. ಓದಿ ಓದಿ ಸವೆದ ಪುಸ್ತಕಗಳು ಹೊಸ ಅಂಗಿ ಚಡ್ಡಿ ಹೊಲಿಸಿಕೊಡಿ ಎಂದು ಪಟ್ಟು ಹಿಡಿದಂತೆ ಮಧ್ಯದ ಸಾಲಿನಲ್ಲಿ ಅಡಗಿರುತ್ತವೆ ಮಾನ ಕಾಪಾಡಿಕೊಳ್ಳಲು. ಇಂಗ್ಲೀಷ್, ಹಿಂದಿ ಪುಸ್ತಕಗಳು ಮಾತ್ರ ಮಡಿ ಮೈಲಿಗೆ ಎಂಬಂತೆ ಯಾರಿಂದಲೂ ಮುಟ್ಟಿಸಿಕೊಳ್ಳಲಾಗದಂತ ಸ್ಥಿತಿಯಲ್ಲಿ ಆರಾಮವಾಗಿರುತ್ತವೆ.
ಗ್ರಂಥಪಾಲಕ ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬಂತೆ ಬಾಯಲ್ಲಿ ಕೆಂಪುರಸ ಉತ್ಪಾದನೆ ಮಾಡುತ್ತಾ ಮೂಡದ ಪೆನ್ನನ್ನು ಕಿವಿಗೆ ಸಿಕ್ಕಿಸಿಕೊಂಡು ತೂಕಡಿಸುತ್ತಿರುತ್ತಾನೆ. ಪೂಜಾರಿಯೇ ಮೈ ಮರೆತಿರುವಾಗ ಭಕ್ತರು ಯಾವ ಲೆಕ್ಕ..?
- ಸಂಗಮೇಶ ಡಿಗ್ಗಿ
ಮೊ : 8553550012

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಎಚ್ಚರವಿರುವುದು ಕನಸುಗಳು ಮಾತ್ರ

ಝಗಮಗಿಸುವ ರಂಗಮಂಚದಲ್ಲಿ ಬಣ್ಣ ಬಣ್ಣದ ವೇಷಭೂಷಣಗಳ ಝಲಕ್ಕು ಕಣ್ಣು ಕುಕ್ಕಿಸುತ್ತದೆ. ಮಾತಿಗೊಮ್ಮೆ ಶಹ್ಬಾಶ್ ಹೇಳುತ್ತಿದ್ದ ತುಟಿ ನಾಟಕ ಮುಗಿದ ಮೇಲೆ ಇದ್ದಕ್ಕಿದಂತೆ ತಟಟ್ಥವಾಗಿ ಬಿಡುತ್ತದೆ. ಮನದಾಳದಲ್ಲಿ ಹಾದು ಹೋದ ಪಾತ್ರಗಳ ನಿಜ ಕಲ್ಪನಾ ಲೋಕ ಮರೆಯಾಗಿ ವಾಸ್ತವದ ಆದಿಮಪ್ರಜ್ಞೆಗೆ ಮನಸ್ಸು ಬಂದಿಳಿಯುತ್ತದೆ. ಚಪ್ಪಾಳೆಯ ಕರಾಡತನ ಮುಗಿದ ಮೇಲೆ ಪಾತ್ರಧಾರಿಗಳ ನಿರ್ಗಮನದ ಜೊತೆ ಪ್ರೇಕ್ಷಕರು ನಡೆಯುತ್ತಾರೆ ಜೀವನ ಎಂಬ ನಾಟಕ ಆಡಲು. ರಂಗಮಂದಿರ ಮಾತ್ರ ತಾನು ಇದ್ದಲ್ಲಿಯೇ ಇರುತ್ತದೆ ಯಾವ ಮುಖಭಾವ ಬದಲಿಸದೆ. ಅದೇ ಹಳೆಯ ಗೋಡೆ, ಸೂರ್ಯನ ಬೆಳಕನ್ನು ತಡವದೇ ಭೂಮಿಗೆ ತಲುಪಿಸಿವ ಛಾವಣಿ, ತುಕ್ಕು ಹಿಡಿದ ಕಬ್ಬಿಣದ ಕುರ್ಚಿಗಳು, ಮುಂದಿನ ನಾಟಕದ ಫಲಕ, ಹಿಂದಿನ ನಾಟಕದ ಟೀಕೇಟು, ಯಾರೋ ಸೇದಿ ಎಸೆದ ಗಣೇಶ ಬಿಡಿ, ಉಗುಳಿದ ಪಾನ್‍ಮಸಾಲ, ಬಸ್‍ಟಿಕೆಟ್, ತಿಂದು ಬಿಸಾಡಿದ ಕರ್ರುಂಕುರ್ರುಂ ಕುರುಕುರೆ ಬ್ಯಾಗಡಿ ಚೀಲ, ಮತ್ತೇ ಅನಾಥವಾಗಿ ಬಿದ್ದಿರುವ ಒಂದು ಒಂಟಿ ಚಪ್ಪಲಿ. ಕುಣಿತದ ಭಾರಕ್ಕೆ ಸುಸ್ತಾಗಿ ರಂಗಮಂಚ ನಿದ್ರಿಸುತ್ತದೆ ನಾಳೆಯ ಕುಣಿತಕ್ಕೆ ಮೈಕೊಡಲು. ಬಣ್ಣಬಣ್ಣದ ಲೈಟ್‍ಗಳು ನೇಣಿಗೆ ಸಿಲುಕಿದಂತೆ ಕಾಣುತ್ತದೆ. ದೂರದಲ್ಲಿ ನಾಯಿ ನಾಟಕದ ಬ್ಯಾನರ್‍ಗೆ ಅಂಟಿಕೊಂಡು ಮಳೆ ಸಿಡಿಸುತ್ತಿರುತ್ತದೆ. ದೊಡ್ಡ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ನಾಟಕದ ಮಾಲೀಕ ಕಲೆಕ್ಷನ್ ರೂಂಗೆ ಎಂಟ್ರಿ ಕೊಡುತ್ತಾನೆ. ಸರಳುಗಳಿಂದ ಆವೃತ್ತವಾಗಿರುವ ಚಿಕ್ಕ ತಾತ್ಕಾಲಿಕ ಜೋಪಡ...

ಮಾನವ ಘನತೆಯ ಪ್ರತಿಪಾದಕ: ಬಿಜವಾಡ ವಿಲ್ಸನ್

 ಮಲಹೊರುವ ಪದ್ದತಿ ತನ್ನ ಕುಲ ಕಸುಬು ಎಂಬ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದ ಯುವಕನೋರ್ವ ತನ್ನ ದೃಡ ನಿರ್ಧಾರದಿಂದ ದೇಶಾದ್ಯಂತ ಮಲ ಹೊರುವ ಅಮಾನವೀಯ ಪದ್ಧತಿ ವಿರುದ್ಧ ಜನಾಂದೋಲನ ರೂಪಿಸಿ ಮಾನವ ಘನತೆಯ ಬದುಕು (ಡಿಗ್ನಿಟಿ ಆಪ್ ಲೈಪ್)ನ್ನು ತನ್ನ ಹೋರಾಟದ ಮೂಲಕ ಎತ್ತಿ ಹಿಡಿದ ಉದ್ದೇಶಕ್ಕಾಗಿ 2016ನೇ ಸಾಲಿನ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ ಲಭಿಸಿದೆ. ಅವರ ಹೆಸರು ಕೋಲಾರ ಜಿಲ್ಲೆಯ ಕೆಜಿಎಪ್ ಮೂಲದ ಬಿಜವಾಡ ವಿಲ್ಸನ್. ಆಂದ್ರದ ಓಂಗೋಲ್ ಜಿಲ್ಲೆಯ ಕಂಬಾಲದೇನು ಗ್ರಾಮದ ಬಿಜವಾಡ ಜಾಕೋಬ್ ಎಂಬುವವರು 1935ರ ಸಂದರ್ಭದಲ್ಲಿ ಕೆಜಿಎಪ್‌ಗೆ ಆಗಮಿಸಿ ಇಲ್ಲಿನ ಬಿಜಿಎಂಎಲ್ ಕಾರ್ಖಾನೆಯಲ್ಲಿ ಪೌರಕಾರ್ಮಿಕರಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. 1966ರಲ್ಲಿ ವಿಲ್ಸನ್ ಜನಿಸಿದರು. ತಮ್ಮ ಪ್ರಾಥಮಿಕ ಶಿಕ್ಷಣವನ್ನು ನೆರೆಯ ಕುಪ್ಪಂನಲ್ಲಿ ನೆರವೇರಿಸಿದ ವಿಲ್ಸನ್ ಕೆಜಿಎಪ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ತದಂತರ ಹೈದರಾಬಾದ್ ವಿವಿಯಲ್ಲಿ ರಾಜಕೀಯ ಶಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಲಹೊರುವ ಕುಲ ಕಸುಬು ತನ್ನ ಕೊನೆಯ ಮಗನಿಗೆ ತಟ್ಟದಿರಲಿ ಎಂಬ ಕಾರಣಕ್ಕೆ ವಿಲ್ಸನ್ ಅವರನ್ನು ಕುಪ್ಪಂನ ವಿದ್ಯಾರ್ಥಿ ನಿಲಯದಲ್ಲಿ ಸೇರಿಸಿ ಶಿಕ್ಷಣ ಕೊಡಿಸಿದ್ದೇ ಪಾಲಕರ ಮಹತ್ಸಾಧನೆಯಾಗಿತ್ತು. ಮಲ ಹೊರುವ ಸಮುದಾಯದವ ಎಂಬ ಕಾರಣಕ್ಕೆ ಸಹ ಪಾಠಿಗಳಿಂದ ಅವಮಾನಕೊಳಗಾಗಿದ್ದ ವಿಲ್ಸನ್ ಇದಕ್ಕೆ ಕಾರಣ ಹುಡುಕಲು ಹೊರಟಾಗ ಪಾಲಕರು ಸತ್ಯ ಮರೆಮ...

ಬಾ ಮಳೆಯೆ ಬಾ....

ಮೂರುಸಂಜೆ ಸಮಯ. ಭೂಮಿಯನ್ನು ಅಪ್ಪಿ ತಬ್ಬಿಕೊಳ್ಳಲು ಮಳೆ ಹನಿಗಳು ಪೈಪೋಟಿಗೆ ಬಿದ್ದಂತೆ ತಾಮುಂದು ನಿಮುಂದು ಎಂದು ಧರಣಿಯ ಕೆನ್ನೆಗೆ ಮುತ್ತಿಕ್ಕುತ್ತವೆ. ಕಾದು ಸುಡುವ ಹಂಚಾಗಿದ್ದ ಭೂಮಿಗೆ ತಣ್ಣನೆಯ ಬಟ್ಟೆಯನ್ನು ಹೊದಿಸಿದ ಅನುಭವ. ಊರ ತುಂಬ ಪಸರಿಸಿದ ಮಣ್ಣ ಸುವಾಸನೆಗೆ ಪಾರಿಜಾತದ ಘಮವು ಸಪ್ಪೆಯಾಗಿದೆ. ಯಾವ ಸೀಮೆಯ, ಯಾವ ಊರಿನ, ಯಾವ ಕೇರಿಯ ನೀರು ಆವಿಯಾಗಿ, ಹೆಪ್ಪುಗಟ್ಟಿ, ಮೋಡವಾಗಿ ಕರಗಿ ನೀರಾಗಿ ಪರಿಚಯವಿಲ್ಲದ ಜಾಗದಲ್ಲಿ ನಾಚಿಕೆ ಪಟ್ಟುಕೊಳ್ಳದೆ ಜಂಬವಿಲ್ಲದೆ ಸುರಿಯುವ ಅಮೃತಘಳಿಗೆಗೆ ಮಣ್ಣಿನೊಳಗೆ ಅಡಗಿ ಕುಳಿತ ಬೀಜ, ಸಸಿ, ಬೇರು ಬಾಯ್ತೆರೆದು ನಿಂತಿರುತ್ತದೆ ತುದಿಗಾಲ ಮೇಲೆ ಬೊಗಸೆಗಣನ್ನನ್ನು ಅರಳಿಸುತ್ತಾ. ಅಲ್ಲೆಲ್ಲೂ ಅಣಬೆಗಳು ಹಿಡಿಮಳೆಗೆ ಭೂಮಿ ನೆನೆಯುವದನ್ನು ತಪ್ಪಿಸಲು ಕ್ಷಣಮಾತ್ರದಲ್ಲಿ ಹೂವಾಗಿ ಅರಳಿ ನಿಲ್ಲುತ್ತವೆ ಹಬ್ಬದ ಛತ್ರಿ ಚಾಮರ ಕಂಡಂತೆ. ಪುಟುಪುಟು ನೆಗೆಯುತ್ತಾ ಓಡಾಡುವ ಕಪ್ಪೆಮರಿಗಳ ಆಟ ಪುಟ್‍ಬಾಲ್ ಆಟ ನೋಡುವಷ್ಟೇ ಮಜಭೂತವಾಗಿರುತ್ತದೆ. ದೇವರ ಆಟ ಬಲ್ಲವರ್ಯಾರು? ಹಸಿದು ಬರಗೆಟ್ಟ ಗಿಡಗಳು ಹಸಿರಾಗಲೂ ಜಡಿಮಳೆ ಬಸಿರಾಗುವಂತೆ ಮಾಡುತ್ತದೆ. ಎಲೆಯುದರಿ ಮುದುಡಿಕೊಂಡ ಗಿಡಗಳು ಮೆಲ್ಲನೆ ಮೈ ಕೊಡವಿಕೊಂಡು ಹಣ್ಣಾದ ಹಳದಿ ಎಲೆಗಳನ್ನು ಉದುರಿಸಿ ಚಿಗುರೆಲೆಗೆ ಜಾಗ ಮಾಡಿಕೊಡುತ್ತದೆ. ಮೆಲ್ಲಗೆ ಹೂವೊಂದು ಗರ್ಭದಿಂದ ಹೊರಬಂದು ನಗುತ್ತಾ ನಾಚಿ ನೀರಾಗುತ್ತದೆ ದುಂಬಿ ಬಂದು ಕುಳಿತಾಗ. ಕೊಟ್ಟಿಗೆಯಲ್ಲಿ ಧೂಳು ಬಡ...